Breaking
Thu. Nov 6th, 2025

ತೀರ್ಥಯಾತ್ರೆ…ಮಂಗಳಕರ ಕ್ಷೇತ್ರಗಳಿಗೆ ಹೋಗುವುದು ಎಂಬುದು ಅದರ ಅರ್ಥ.ಶ್ರೀ ನೀಲಕಂಠ ಗುರೂಜಿ

!! ಆಧ್ಯಾತ್ಮಿಕ ವಿಚಾರ.!!
______________________

*ತೀರ್ಥಯಾತ್ರೆ…ಮಂಗಳಕರ ಕ್ಷೇತ್ರಗಳಿಗೆ ಹೋಗುವುದು ಎಂಬುದು ಅದರ ಅರ್ಥ..!*

ತೀರ್ಥ ಎಂದರೇನು?

ತೀರ್ಥ ಎಂಬುದು ಹಿಂದೂ ಸಂಸ್ಕ ೃಯದೇ ವಿಶೇಷ ಶಬ್ದ. ಸಾಧಾರಣವಾಗಿ ದೇವರಿಗೆ ಅಭಿಷೇಕ ಮಾಡಲ್ಪಟ್ಟ ನೀರು ತೀರ್ಥ, ಎಂದರೆ ಪವಿತ್ರ ಎನ್ನಿಸುತ್ತೆ. ಅನೇಕ ಜಲಾಶಯಗಳು ಬಾವಿ, ಕೆರೆ, ನದಿ, ಸಮುದ್ರಗಳು ಎಲ್ಲಿ ದೈವಸನ್ನಿಧಿ, ಋಷಿಸನ್ನಿಧಿ ಇರುವುದೋ ಅವು ತೀರ್ಥಗಳಾಗುತ್ತವೆ. ಕೆಲವು ಸಂನ್ಯಾಸಿಗಳ ಹೆಸರಿನ ಕೊನೆಯಲ್ಲಿ ತೀರ್ಥ ಎಂಬ ಶಬ್ದವೂ ಬರುತ್ತದೆ. ಅಲ್ಲೂ ಪವಿತ್ರ ಎಂಬ ಅರ್ಥ ಬರುತ್ತದೆ. ಹೀಗೆ ಎಲ್ಲಿ ಹೋಗುವುದರಿಂದ ಪುಣ್ಯ ಬರುವುದೋ ಆ ಸ್ಥಾನವನ್ನು ತೀರ್ಥ ಎನ್ನುತ್ತಾರೆ. ಕ್ಷೇತ್ರ ಎನ್ನುತ್ತಾರೆ. ತೀರ್ಥಕ್ಷೇತ್ರ ಎಂದೂ ಹೇಳುತ್ತಾರೆ.

ಯಾತ್ರೆ ಎಂದರೇನು?

ಯಾತ್ರೆ ಎಂದರೆ ನಿರ್ದಿಷ್ಟ ಉದ್ದೇಶದಿಂದ ಹೊರಡುವ ಪ್ರಯಾಣ ‘ಜೈತ್ರಯಾತ್ರೆ’, ‘ದಂಡಯಾತ್ರೆ’, ‘ತೀರ್ಥಯಾತ್ರೆ’, ‘ಅಂತ್ಯಯಾತ್ರೆ’ ಇತ್ಯಾದಿ. ಶಬ್ದಗಳೇ ಉದ್ದೇಶವನ್ನೂ ಸ್ಪಷ್ಟಗೊಳಿಸುತ್ತವೆ. ಮನೋರಂಜನೆಗಾಗಿಯೋ ಸ್ವಹಿತಕ್ಕಾಗಿಯೋ ವ್ಯಾಪಾರಕ್ಕಾಗಿಯೋ ಮಾಡುವ ಪ್ರಯಾಣ ಯಾತ್ರೆ ಎನ್ನಿಸದು. ವಿಶೇಷವಾಗಿ ಧಾರ್ವಿುಕ ದೃಷ್ಟಿಯಿಂದ ಮಾಡುವ ಪ್ರಯಾಣ ತೀರ್ಥಯಾತ್ರೆ ಎನ್ನಿಸುತ್ತೆ. ಮಂಗಳಕರ ಕ್ಷೇತ್ರಗಳಿಗೆ ಹೋಗುವುದು ಎಂಬುದು ಅದರ ಅರ್ಥ.

ತೀರ್ಥಯಾತ್ರೆ ಏಕೆ ಮಾಡಬೇಕು?

ತೀರ್ಥಯಾತ್ರೆ ಮಾಡುವುದು ಆತ್ಮ ಸಂಸ್ಕಾರಕ್ಕಾಗಿ. ವ್ಯಕ್ತಿಗತ, ಪಾರಿವಾರಿಕ, ಸಾಮಾಜಿಕ ಹಾಗೂ ಆತ್ಮೋನ್ನತಿಯ ವಿಕಾಸಕ್ಕಾಗಿ. ತೀರ್ಥಯಾತ್ರೆ ಒಂಟಿಯಾಗಿ ಮಾಡಬಹುದು. ಸಮೂಹದಲ್ಲೂ ಮಾಡಬಹುದು. ಎಲ್ಲ ರೀತಿಯ ತೀರ್ಥಯಾತ್ರೆಗಳಲ್ಲಿಯೂ ಒಂದಲ್ಲ ಒಂದು ರೀತಿಯ ನಿಯಮ ಇರುತ್ತದೆ. ತೀರ್ಥಯಾತ್ರೆ ನಮ್ಮ ದೇಶದ್ದೇ ವೈಶಿಷ್ಟ ್ಯ ಈ ದೇಶದ ಅಂಗುಲ ಅಂಗುಲವೂ ಪವಿತ್ರವೇ. ಊರು, ಗ್ರಾಮ, ಪಟ್ಟಣಗಳಿಂದ ಹಿಡಿದು ಗುಡ್ಡ ಬೆಟ್ಟ ಕಾಡು, ನದೀ, ಸರೋವರಗಳೆಲ್ಲ ತೀರ್ಥಕ್ಷೇತ್ರಗಳೇ. ಭೂಮಿ ನಮಗೆ ತಾಯಿ, ಅವಳ ಪೂಜೆಯೇ ಶ್ರೇಷ್ಠ ಪೂಜೆ. ಜೊತೆಗೆ ವಿಶೇಷ ಸಂದರ್ಭಗಳಲ್ಲಿ ನಿರ್ದಿಷ್ಟ ಸ್ಥಾನಗಳಿಗೆ ಹೋಗಿ ಅಲ್ಲಿ ದೈವೀಶಕ್ತಿಯನ್ನು ಅನುಭವಿಸಿ ಆವಾಹಿಸಿಕೊಳ್ಳುವುದೇ ತೀರ್ಥಯಾತ್ರೆಯ ಉದ್ದೇಶ. ಭಕ್ತಿಭಾವದಿಂದ ನಿಯಮಬದ್ಧವಾಗಿ ನಡೆಯುತ್ತಾ ಕ್ರಮೇಣ ತಾನೇ ದೇವರಾಗುವ ಪ್ರಯತ್ನವೇ ತೀರ್ಥಯಾತ್ರೆ. ‘ಶಿವೋ ಭೂತ್ವಾ ಶಿವಂ ಯಜೇತ್’, ಶಿವನಾಗಿ ಶಿವನನ್ನು ಆರಾಧಿಸು ಎಂಬುದು ಎಲ್ಲರ ಮನಸ್ಸಿನ ಸಂಕಲ್ಪ. ಪ್ರತಿಯೊಬ್ಬ ಹಿಂದೂವಿನ ಜೀವನದ ಒಂದು ಭಾಗ ತೀರ್ಥಯಾತ್ರೆ. ತಮ್ಮ ಊರಿನ ಸಮೀಪದ ಸ್ಥಳದ, ತಮ್ಮ ಕುಲದೇವರ ಜಾತ್ರೆಗೆ ಪದೇಪದೆ ಹೋಗಲು ಸಾಧ್ಯ. ಜೀವನದಲ್ಲಿ ಒಮ್ಮೆಯಾದರೂ ಕಾಶೀ ರಾಮೇಶ್ವರಕ್ಕೆ ಹೋಗಬೇಕು ಎಂಬ ಮನಸ್ಸು ಎಲ್ಲರಲ್ಲಿ ಬರಬೇಕು. ಮನಸ್ಸು ದೃಢವಾದಂತೆ ಅಮರನಾಥ ಯಾತ್ರೆ, ಕೈಲಾಸಮಾನಸಸರೋವರ ಯಾತ್ರೆಗಳಿಗೂ ಹೋಗಬೇಕು. ಇವೆರಡೂ ಅತಿ ಹೆಚ್ಚಿನ ದೈಹಿಕ ಶ್ರಮ, ಮಾನಸಿಕ ತೊಳಲಾಟ ಹಾಗೂ ಆರ್ಥಿಕ ಹೊರೆಯನ್ನು ಒಳಗೊಂಡಿವೆ. ಹಾಗಾಗಿ ಈ ಜನ್ಮದಲ್ಲಿ ಅಲ್ಲದಿದ್ದರೆ ಮುಂದಿನ ಜನ್ಮದಲ್ಲಾದರೂ ಈ ಎರಡೂ ಕ್ಷೇತ್ರಗಳಿಗೆ ಯಾತ್ರೆ ಮಾಡಬೇಕೆಂಬ ಸಂಕಲ್ಪ ಹಿಂದೂಗಳದ್ದು.

ತೀರ್ಥಯಾತ್ರೆ ಮಾಡುವಾಗ ಗಮನಿಸಬೇಕಾದುದೇನು?

ಈಗೀಗ ರಸ್ತೆ, ವಾಹನಗಳ ಅನುಕೂಲ ಹೆಚ್ಚಿರುವುದರಿಂದ ತೀರ್ಥಯಾತ್ರೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಲಕ್ಷಸಂಖ್ಯೆಯಲ್ಲಿ ಕೋಟಿ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿರುವ ಕುಂಭಮೇಳ, ಪುಷ್ಕರ, ಶಬರಿಮಲೈ, ಕಾವಡಿಯಾತ್ರೆ ಇತ್ಯಾದಿ ಯಾತ್ರೆಗಳಿವೆ. ಯಾವುದೇ ಯಾತ್ರೆಯಾದರೂ ದೂರ, ದಾರಿ, ಜೊತೆಗಾರರು, ಆರ್ಥಿಕ ಹೊಣೆ, ಮಾರ್ಗದಲ್ಲಿ ನಿವಾಸ, ಭೋಜನ, ಟಿಕೆಟ್ ಆರಕ್ಷಣೆ ಇತ್ಯಾದಿಗಳ ಕುರಿತಾಗಿ ಖಚಿತ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹಲವು ಯಾತ್ರಾ ಕಂಪನಿಗಳು ಪ್ರಯಾಣಿಕರ ಹಿತವನ್ನೇ ಮುಖ್ಯವಾಗಿಟ್ಟುಕೊಂಡು ಚೆನ್ನಾಗಿ ವ್ಯವಸ್ಥೆ ಮಾಡುತ್ತಿದ್ದಾರೆ. ಅಂತಹವರನ್ನು ಹುಡುಕಿ ಅವರ ಮೂಲಕವೂ ಹೋಗಬಹುದು. ಯಾತ್ರೆಯ ಸಮಯದಲ್ಲಿ ಯಾರೊಡನೆಯೂ ಬಿರುಸು ಮಾತನಾಡದೆ ತರ್ಕಕ್ಕಿಳಿಯದೆ ನಗುನಗುತ್ತಿರಬೇಕು. ತೊಂದರೆಗಳಾದಾಗ ಅದರ ಬಗೆಗೇ ಹೆಚ್ಚು ಕೊರಗದೆ ಹೊಂದಿಕೊಂಡರೆ ನಮ್ಮ ಯಾತ್ರೆ ಸುಖಕರ ಆಗುತ್ತದೆ. ಸಹಯಾತ್ರಿಕರೊಡನೆ ಪಾರಿವಾರಿಕ ಭಾವದಿಂದ ಬೆರೆತು ಪರಸ್ಪರ ಕಷ್ಟ ಸುಖಗಳಲ್ಲಿ ಒಂದಾಗಬೇಕು. ಹಿಂತಿರುಗಿದಾಗ ಬಂಧುಮಿತ್ರರಿಗೆ ಏನೇನು ತಿಳಿಸಬೇಕೆಂದು ಯೋಚಿಸಿ ಅಂತಹ ಮಾಹಿತಿಗಳನ್ನು ಸಂಗ್ರಹಮಾಡಿ ಒಂದು ಪುಸ್ತಕದಲ್ಲಿ ಬರೆದಿಡಬೇಕು. ಬಂಧುಗಳಿಗೆ ನೆನಪಿಗೆಂದು ನೀಡಲು ಪ್ರಸಾದ ಹಾಗೇ ಇನ್ನೇನಾದರೂ ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಭಕ್ತಿ ವಿನಯಗಳಿಂದ ಸ್ನಾನ, ಪೂಜೆಗಳಲ್ಲಿ ಭಾಗವಹಿಸಿ ಅಲ್ಲಲ್ಲಿನ ಸ್ಥಳಪುರಾಣಗಳನ್ನು ಕೇಳಿ ತಿಳಿದುಕೊಳ್ಳಿ. ನಿಮಗೆ ನೆರವಾಗುತ್ತಿರುವವರ ಹೆಸರನ್ನು ಸಾಧ್ಯವಾದಷ್ಟೂ ನೆನಪಿನಲ್ಲಿ ಇಟ್ಟುಕೊಳ್ಳಿ. ಶಕ್ತಿಯಿದ್ದಷ್ಟು ದಾನ ಮಾಡಬೇಕು.

ತೀರ್ಥಯಾತ್ರೆಯಲ್ಲಿ ಮಾಡಬಾರದ್ದು ಯಾವುವು?

ಅನವಶ್ಯಕವಾದ ವಾದ-ವಿವಾದ, ಜಗಳ ಕೂಡದು. ಒಬ್ಬರೇ ಪ್ರತ್ಯೇಕವಾಗಿ ಓಡಾಡಲು ಹೋಗಬಾರದು. ಹೊರಲಾಗದಷ್ಟು ವಸ್ತುಗಳನ್ನು ಸಂಗ್ರಹಿಸಬಾರದು. ಕಂಡಲ್ಲಿ ಉಗುಳುವುದು, ತುಂಬಾ ಗಟ್ಟಿಯಾಗಿ ಮಾತನಾಡುವುದು ಕೂಡದು. ನಿಮಗೆ ದಾರಿ ತೋರುವವರು ವರ್ಣನೆ ಮಾಡುತ್ತಿರುವಾಗ ಕುಹಕಪ್ರಶ್ನೆ ಹಾಕದೆ ಗಂಭೀರವಾಗಿ ಕೇಳಿ ಗ್ರಹಿಸಬೇಕು. ತೀರ್ಥಕ್ಷೇತ್ರಗಳನ್ನು ಮಲಿನಗೊಳಿಸಬಾರದು. ದೇವಸ್ಥಾನಗಳು, ಮರಗಳು, ಶಿಲಾಶಾಸನಗಳು ಮುಂತಾದ ಪವಿತ್ರಸ್ಥಳಗಳು ಹಾಗೂ ಸುರಕ್ಷಿತ ಸ್ಥಳಗಳ ಮೇಲೆ ನಮ್ಮ ಹೆಸರು, ಊರು ಮುಂತಾದುವನ್ನು ಬರೆಯಬಾರದು. ಯಾರಿಗೂ ನೋವುಂಟುಮಾಡಬಾರದು. ಮನದಲ್ಲಿ ಪ್ರಶ್ನೆ ಬಂದರೆ ಕೊನೆಯಲ್ಲಿ ಕೇಳಬಹುದು.

ಅನ್ಯಕ್ಷೇತ್ರೇ ಕೃತಂ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ |

ಪುಣ್ಯಕ್ಷೇತ್ರೇ ಕೃತಂ ಪಾಪಂ ವಜ್ರಲೇಪೋ ಭವಿಷ್ಯತಿ ||

‘ಬೇರೆಡೆ ಮಾಡಿದ ಪಾಪ ಪುಣ್ಯಕ್ಷೇತ್ರದಲ್ಲಿ ನಾಶವಾಗುತ್ತೆ. ಪುಣ್ಯಕ್ಷೇತ್ರದಲ್ಲಿ ಮಾಡಿದ ಪಾಪ ವಜ್ರಲೇಪದಂತೆ ಶಾಶ್ವತವಾಗಿ ಉಳಿಯುತ್ತದೆ’ ಎಂಬುದು ಗೊತ್ತಿರಲಿ.

ತೀರ್ಥಯಾತ್ರೆಯಲ್ಲಿ ಸಂಗ್ರಹಿಸಬೇಕಾದ್ದು ಏನು?

ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಪೌರಾಣಿಕ, ಐತಿಹಾಸಿಕ ಮಾಹಿತಿ. ನಿಮ್ಮ ಜೊತೆಗೆ ಬಂದ ಸ್ಥಾನೀಯ ವ್ಯಕ್ತಿಗಳ ಮಾಹಿತಿ, ನಿಮ್ಮ ಸಮೀಪದ ಬಂಧುಗಳಿಗಾಗಿ ಆ ಕ್ಷೇತ್ರದಿಂದ ಏನನ್ನು ಕೊಂಡೊಯ್ಯಬಹುದು – ಚಿತ್ರ, ದಾರ, ತೀರ್ಥ, ಪ್ರಸಾದ, ವಿಭೂತಿ, ಕುಂಕುಮ ಇತ್ಯಾದಿಗಳ ಪೈಕಿ ಯಾವುದು ಎಂದು ಚಿಂತಿಸಿ ಸಂಗ್ರಹಿಸಬೇಕು.

ತೀರ್ಥಯಾತ್ರೆಯ ನಂತರ ಮಾಡಲೇಬೇಕಾದುದು ಏನು?

ಬಂಧುಮಿತ್ರರನ್ನೆಲ್ಲ ಒಟ್ಟಾಗಿ ಸೇರಿಸಿ ತಂದಿರುವ ತೀರ್ಥ, ಪ್ರಸಾದಗಳನ್ನು ಹಂಚಬೇಕು. ಹಂಚುವ ಮುನ್ನ ನೀವು ನೋಡಿದ ಸ್ಥಾನಗಳು ಅಲ್ಲಿನ ವಿಶೇಷ ಮಾಹಿತಿಗಳು, ನಿಮ್ಮ ಗಮನಕ್ಕೆ ಬಂದ ಉತ್ತಮ ಸಂಗತಿಗಳು ಎಲ್ಲವನ್ನೂ ಹೇಳಬೇಕು. ಕೇಳಿದವರ ಮನಸ್ಸಿನಲ್ಲಿ ನಾವೂ ಒಮ್ಮೆ ಹೋಗಿಬರಬೇಕೆಂಬ ಆಸಕ್ತಿ ಬರುವಂತೆ ಹೇಳಬೇಕು. ಅನಿವಾರ್ಯ ಅಲ್ಲದಿದ್ದಲ್ಲಿ ತೊಂದರೆಗಳ, ಕಷ್ಟಗಳ ಉಲ್ಲೇಖ ಬೇಡ. ಲೆಕ್ಕ ಪತ್ರ ನೋಡಿ ನೀವು ಯಾರಿಗಾದರೂ ಏನಾದರೂ ಕೊಡುವುದು ಬಾಕಿ ಇದ್ದರೆ ಬೇಗ ತಲುಪಿಸಿ.

!!ಬಂಧುಗಳೇ!!
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*
*!! ಶ್ರೀಶಿವಾರ್ಪಣಮಸ್ತು !!
ಶ್ರೀ ನೀಲಕಂಠ ಗುರೂಜಿ
9901713668
________________________

Related Post