ದೀಪಾವಳಿಗೂ ಮುನ್ನ ಆಚರಿಸುವ ನೀರು ತುಂಬುವ ಹಬ್ಬ
….,…….
ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ನೀರು ತುಂಬುವ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಗಂಗೆ ಕಳಸ ಪೂಜೆ ಎಂದೂ ಕರೆಯಲಾಗುತ್ತದೆ. ಈ ಹಬ್ಬವನ್ನು ದೀಪಾವಳಿಗೂ ಒಂದು ದಿನದ ಮೊದಲು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ನೀರು ತುಂಬುವ ಹಬ್ಬವೆಂದು ಕರೆದರೆ, ಉತ್ತರ ಭಾರತದಲ್ಲಿ ಇದನ್ನು ಧನತೇರಸ್ ಅಥವಾ ಧನತ್ರಯೋದಶಿ ಎಂದು ಕರೆಯಲಾಗುತ್ತದೆ.
ಈ ವರ್ಷ ನೀರು ತುಂಬೋ ಹಬ್ಬ ಅಥವಾ ನೀರು ತುಂಬುವ ಹಬ್ಬವನ್ನು ನವೆಂಬರ್ 11 ರಂದು ಆಚರಿಸಲಾಗುತ್ತದೆ. ಈ ಪೂಜೆಯನ್ನು ಸಂಜೆ ಸಮಯದಲ್ಲಿ ಮಾಡಲಾಗುತ್ತದೆ. ಪುರಾಣದ ಪ್ರಕಾರ ಸಮುದ್ರ ಮಂಥನ ಆದಾಗ ಲಕ್ಷ್ಮಿ ದೇವಿ ಉದ್ಭವಿಸಿದ ದಿನ, ಅವಳೊಂದಿಗೆ ಅವಳ ಅಣ್ಣ-ತಮ್ಮಂದಿರು ಯಕ್ಷ, ಚಂದ್ರ, ಕಾಮಧೇನು, ಐರಾವತ, ಕಲ್ಪವೃಕ್ಷವೆಲ್ಲ ಬಂದ ದಿನ ಎಂದು ಹೇಳಲಾಗುತ್ತದೆ. ಮನುಷ್ಯನಿಗೆ ಲೌಕಿಕ ಮತ್ತು ಲೋಕೋತ್ತರ ಸುಖ ಸಮೃದ್ಧಿಯನ್ನು ಕೊಡುವ ಶಕ್ತಿಗಳು ಉದ್ಭವಿಸಿದ ದಿನ. ಹಾಗಾಗಿ ಈ ದಿನ ಲಕ್ಷ್ಮಿ ಹಾಗೂ ಲಕ್ಷ್ಮಿಯೊಂದಿಗೆ ಉದ್ಭವಿಸಿದ ಎಲ್ಲಾ ಶಕ್ತಿಗಳನ್ನು ನಾವು ಕಳಸವನ್ನಿಟ್ಟು ಪೂಜಿಸಬೇಕು. ನೀರು ತುಂಬುವ ಹಬ್ಬ ಆಚರಿಸುವ ವಿಧಾನ: – ನೀರ್ ತುಂಬೋ ಹಬ್ಬದ ದಿನದಂದು ಸಂಜೆ ಮನೆಯ ಸದಸ್ಯರೆಲ್ಲಾ ಸ್ನಾನ ಮಾಡಿ ಶುದ್ಧರಾಗಬೇಕು. – ಮನೆಯಲ್ಲಿ ನೀರು ತುಂಬಿಸುವ ಪಾತ್ರೆ, ಸ್ನಾನ ಮಾಡಲು ಬಳಸುವ ಹಂಡೆ ಇತ್ಯಾದಿ ನೀರನ್ನು ತುಂಬಿಸಲು ಬಳಸುವ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಬೇಕು. – ಅನಂತರ ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡಬೇಕು. – ಅಥವಾ ಕನಿಷ್ಠ ಮನೆಯಲ್ಲಿ ಬರುವ ನಲ್ಲಿ ನೀರನ್ನು ಶುದ್ಧವಾಗಿ ಹಿಡಿದು, ದೇವರ ಮುಂದೆ ಮಂಡಲವನ್ನು ಹಾಕಿ ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಬೇಕು. – ಗಂಗಾಜಲವನ್ನು ಒಂದು ನೀರು ಕಾಯಿಸುವ ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು. ಗಂಗಾಜಲ ಸಿಗದಿದ್ದರೆ ಶುದ್ಧವಾದ ನೀರನ್ನೂ ಬಳಸಬಹುದು. ಆ ಪಾತ್ರೆಯನ್ನು ಪುಷ್ಪಾದಿಗಳಿಂದ ಅಲಂಕಾರ ಮಾಡಿ ದೇವರ ಮುಂದೆ ಮತ್ತು ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಿ, ಆಚಮನ ಮಾಡಿ, ಸಂಕಲ್ಪ ಮಾಡಿಕೊಂಡು ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ. ಪೂಜೆಯ ಸಮಯದಲ್ಲಿ ಎಲ್ಲಾ ಸಕಲ ದೇವತೆಗಳನ್ನು ಸ್ಮರಿಸಿ, ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಗಂಗೆಯನ್ನು ಪೂಜಿಸಬೇಕು. – ಈ ದಿನ ತೊಳೆದು ಶುದ್ಧಗೊಳಿಸಿದ ನೀರಿನ ಪಾತ್ರೆಗಳಿಗೆ ಮಾವಿನ ತೋರಣ ಅಥವಾ ಇನ್ನಿತರ ಬಳ್ಳಿಗಳನ್ನು ಕಟ್ಟಿ ಅದಕ್ಕೂ ಪೂಜೆಯನ್ನು, ಆರತಿಯನ್ನು ಮಾಡಲಾಗುತ್ತದೆ. ಈ ನೀರು ತುಂಬುವ ಹಬ್ಬದ ಮರುದಿನ: ನೀರು ತುಂಬವ ಹಬ್ಬದ ದಿನದಂದು ಸಂಜೆ ನೀರಿನ ಹಂಡೆಗಳಿಗೆ ನೀರನ್ನು ತುಂಬಿಸಿ ಪೂಜೆಯನ್ನು ಮಾಡಿ ಹಾಗೇ ಮುಚ್ಚಿಡಲಾಗುತ್ತದೆ. ಮರುದಿನ ಅಂದರೆ ನರಕ ಚತುರ್ದಶಿ ಅಥವಾ ದೀಪಾವಳಿ ದಿನದಂದು ಮನೆಯ ಸದಸ್ಯರೆಲ್ಲಾ ಮೈಗೆ ಎಣ್ಣೆಯನ್ನು ಹಚ್ಚಿಕೊಂಡು ಈ ನೀರಿನಿಂದಲೇ ಸ್ನಾನವನ್ನು ಮಾಡಬೇಕು. ಇದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು, ಕೆಟ್ಟ ಅಂಶಗಳು ನಮ್ಮಿಂದ ದೂರ ಉಳಿಯುತ್ತದೆ ಎಂಬುದು ಇದರ ಹಿಂದಿನ ನಂಬಿಕೆಯಾಗಿದೆ.
ದೀಪಾವಳಿ ಪೂಜೆಗೆ ಬೇಕಾಗುವ ಸಾಮಾಗ್ರಿ, ಲಕ್ಷ್ಮಿ ಪೂಜೆ ವಿಧಾನ, ಮಂ ನೀರ್ ತುಂಬುವ ಹಬ್ಬ ಅಥವಾ ನೀರು ತುಂಬುವ ಹಬ್ಬವನ್ನು ದಕ್ಷಿಣ ಭಾರತದ ಹೆಚ್ಚಿನ ಸ್ಥಳಗಳಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಈ ನೀರಿನಿಂದ ಸ್ನಾನ ಮಾಡುವುದರಿಂದ ಸೌಂದರ್ಯವೂ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಮಲ್ಲಿಕಾರ್ಜುನ ಚಿಕ್ಕಮಠ.
ಧಾರವಾಡ.

