- ಜೂನ್ 15ರಂದು ಕೆಸಿಡಿಯಲ್ಲಿ ಗುರುವಂದನೆ ಕಾರ್ಯಕ್ರಮ
ಧಾರವಾಡ: ಇಲ್ಲಿನ ಕರ್ನಾಟಕ ಕಲಾ ಮಹಾವಿದ್ಯಾಲಯದ 2004 ರ ಬ್ಯಾಚಿನ ವಿದ್ಯಾರ್ಥಿ ಬಳಗದಿಂದ ‘ಆಚಾರ್ಯ ದೇವೋಭವ-2025’ ಗುರುವಂದನಾ ಕಾರ್ಯಕ್ರಮ ಜೂನ್ 15ರಂದು ಬೆಳಿಗ್ಗೆ 10 ಗಂಟೆಗೆ ಕೆಸಿಡಿ ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ನಡೆಯಲಿದೆ.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಐ.ಸಿ.ಮುಳಗುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. 1999 ರ ಪ್ರಥಮ ಪಿಯುಸಿಯಿಂದ ಹಿಡಿದು 2004ರ ಪದವಿಯವರೆಗೆ ವಿದ್ಯಾದಾನ ಮಾಡಿದ ಕಾಲೇಜಿನ ಎಲ್ಲ ವಿಭಾಗಗಳ ಎಲ್ಲ ಗುರುಗಳೂ ಅತಿಥಿಗಳಾಗಿ ಭಾಗವಹಿಸುವರು. ವಿದ್ಯಾರ್ಥಿ ಬಳಗದಿಂದ ಎಲ್ಲರಿಗೂ ಗೌರವ ಸನ್ಮಾನ ಮಾಡಲಾಗುವುದು.
ಕೆಸಿಡಿಯಲ್ಲಿ ಶಿಕ್ಷಣ ಪಡೆದು ದೇಶದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಹಳೆಯ ವಿದ್ಯಾರ್ಥಿಗಳೆಲ್ಲ ಮತ್ತೆ ಒಂದೆಡೆ ಸೇರಲಿದ್ದಾರೆ. ಎರಡು ದಶಕಗಳ ಬಳಿಕ ಒಂದೆಡೆ ಸಮಾವೇಶಗೊಳ್ಳುತ್ತಿರುವ ನೂರಾರು ಮನಸ್ಸುಗಳು ತಮ್ಮ ವಿದ್ಯಾರ್ಥಿ ಬದುಕಿನ ನೆನಪುಗಳನ್ನು ಮೆಲಕು ಹಾಕಲಿವೆ.
ವಿದ್ಯಾದಾನ ಮಾಡಿ ಬದುಕು ಕಟ್ಟಿಕೊಟ್ಟ ಗುರುಗಳನ್ನು ಗೌರವಿಸುವುದು, ಭವಿಷ್ಯದಲ್ಲಿ ಕಾಲೇಜಿನ ಪ್ರಗತಿ ಕುರಿತು ಚರ್ಚಿಸುವುದು, ವಿದ್ಯಾರ್ಥಿಗಳಿಗೆ ಬೇಕಾದ ಮಾರ್ಗದರ್ಶನ ಮುಂತಾದ ನಿರ್ಧಾರಗಳ ಕುರಿತು ಕೆಸಿಡಿಯನ್‌ಗಳ ಬಳಗ ಈ ಕಾರ್ಯಕ್ರಮ ಆಯೋಜಿಸಿದೆ.
ರೈತರಾಗಿ, ಸೈನಿಕರಾಗಿ, ರಾಜಕಾರಣಿಗಳಾಗಿ, ತಹಶೀಲ್ದಾರರಾಗಿ, ಶಿಕ್ಷಕರಾಗಿ, ವಕೀಲರಾಗಿ, ಪೊಲೀಸ್ ಅಧಿಕಾರಿಗಳಾಗಿ, ಕಲಾವಿದರಾಗಿ, ಪತ್ರಕರ್ತರಾಗಿ, ಹೋರಾಟಗಾರರಾಗಿ, ಗೃಹಿಣಿಯರಾಗಿ ಬದುಕು ಕಟ್ಟಿಕೊಂಡ, ಸೇವೆಗಳಲ್ಲಿ ನಿರತರಾದ ಎಲ್ಲರೂ ಒಂದೇ ವೇದಿಕೆಯಲ್ಲಿ ಸಂಭ್ರಮಿಸಲಿದ್ದಾರೆ.